ವೇಟ್‍ಲಿಫ್ಟಿಂಗ್
 	ಒಂದು ವ್ಯಾಯಾಮ. ಸ್ನಾಯುಗಳು ನಿರ್ದಿಷ್ಟ ಸಮಯದಲ್ಲಿ ಪ್ರತಿರೋಧವನ್ನು ಎದುರಿಸಬೇಕಾದಾಗ ಬಲಿಷ್ಠವಾಗುತ್ತವೆ ಮತ್ತು ಬಲಿಯುತ್ತವೆ ಎಂಬುದೇ ಈ ವ್ಯಾಯಾಮದ ಮೂಲತತ್ತ್ವ (ವೇಟ್ ಲಿಫ್ಟಿಂಗ್). ಕೈಯಿಂದ ತಲೆಯ ಮೇಲೆ ಭಾರವನ್ನು ಎತ್ತುವುದ ರಿಂದ ಭುಜ ಮತ್ತು ತೋಳುಗಳು ಬಲಿಷ್ಠವಾಗುತ್ತವೆ. ಭುಜದ ಮೇಲೆ ಭಾರವನ್ನು ಇಟ್ಟುಕೊಂಡು ಕಾಲುಗಳನ್ನು ಬಗ್ಗಿಸುವ ವ್ಯಾಯಾಮದಿಂದ ಕಾಲುಗಳು ಬಲಗೊಳ್ಳುತ್ತವೆ. 

	ಭಾರ ಎತ್ತುವುದು ಮಾನವ ದೇಹಶಕ್ತಿಯ ಒಂದು ಸಂಕೇತ. ಹೆಚ್ಚು ಭಾರ ಎತ್ತುವವ ಭಾರೀ ಮೈಕಟ್ಟಿನವನಿರಬೇಕು. ಒಳ್ಳೆಯ ಮೈಕಟ್ಟಿನವ ಹೆಚ್ಚು ಭಾರ ಎತ್ತಬೇಕು. ಇದು ನಮ್ಮ ಕಲ್ಪನೆ, ತರ್ಕ; ಬಹುಶಃ ಅನುಭವಕೂಡ. 
	ಇಂದು ಭಾರ ಎತ್ತುವುದು ಒಂದು ಸ್ಪರ್ಧೆ ಹಾಗೂ ಶರೀರ ಸಾಮಥ್ರ್ಯ ವರ್ಧನೆಯ ಒಂದು ಅಭ್ಯಾಸ. ಶರೀರ ಸೌಷ್ಠವ ಹೆಚ್ಚಿಸಿಕೊಳ್ಳಲು, ಶಕ್ತಿಯನ್ನು ಬೆಳೆಸಿಕೊಳ್ಳಲು, ಕ್ರೀಡಾ ಸಾಮಥ್ರ್ಯವನ್ನು ವೃದ್ಧಿಪಡಿಸಿಕೊಳ್ಳಲು, ಭಾರ ಎತ್ತುವಿಕೆಯ ಅಭ್ಯಾಸಮಾಡುತ್ತಾರೆ. ಈ ಸ್ಪರ್ಧೆ ಬೆಳೆದುಬಂದಿರುವುದು ಜರ್ಮನಿಯಲ್ಲಿ. ಅದು ಮುಂದೆ ಆಸ್ಟ್ರೇಲಿಯ, ಸ್ವಿಟ್ಜರ್ಲೆಂಡ್ ಹೀಗೆ ಇಡೀ ಯುರೋಪನ್ನೇ ವ್ಯಾಪಿಸಿತು. ಇದು ನಡೆದದ್ದು 1860ರ ಅನಂತರ. ಒಂದು ಶತಮಾನದ ಹಿಂದೆ ಇದ್ದ ಭಾರ ಎತ್ತುವ ಸ್ಪರ್ಧೆಗಳು ತೀರ ಭಿನ್ನವಾಗಿದ್ದುವು. ಆಗ ಭಾರವನ್ನು ಬದಲಿಸಲು ಬರುವಂತಿರಲಿಲ್ಲ. ಆದ್ದರಿಂದ ತೀರ್ಪುಕೊಡಲು ಕಷ್ಟವಾಗುತ್ತಿತ್ತು. ಒಬ್ಬೊಬ್ಬನೆ ಅನೇಕ ಸಲ ಪ್ರಯತ್ನ ಮಾಡಬೇಕಾಗಿತ್ತು. 

	ಅನಂತರ ಬಂದದ್ದು ಒಂದು ಬಾರು. ಅದರ ತುದಿಗೆ ಎರಡು ಘನವಾದ ಗುಂಡುಗಳು ಅಥವಾ ಪೊಳ್ಳು ಚೆಂಡುಗಳು. ಅವುಗಳಲ್ಲಿ ಉಸುಕನ್ನೋ ಸೀಸದ ಪುಡಿಯನ್ನೋ ಬೇಕಾದ ಭಾರಕ್ಕೆ ತುಂಬುತ್ತಿದ್ದರು. ಈಗ ಭಾರ ಎತ್ತುವಿಕೆಯಲ್ಲಿ ಬಾರ್‍ಬೆಲ್ ಎಂಬ ಉಪಕರಣವನ್ನು ಬಳಸುತ್ತಾರೆ. 5 ರಿಂದ 7 ಅಡಿ ಉದ್ದದ ಉಕ್ಕಿನ ಸರಳು ಮತ್ತು ಅದರ ತುದಿಗಳಲ್ಲಿ ಸಿಕ್ಕಿಸುವ ಕಬ್ಬಿಣದ ಭಾರವಾದ ಚಕ್ರಗಳೂ ಇದರಲ್ಲಿ ಇರುತ್ತವೆ. ಆವಶ್ಯಕತೆಗೆ ಅನುಗುಣವಾಗಿ ಬಾರ್‍ಬೆಲ್‍ನ ತೂಕವಿರುತ್ತದೆ. ಭಾರ ಎತ್ತುವಿಕೆಯಲ್ಲಿ ಮೂರು ವಿಧದ ಅಭ್ಯಾಸಗಳಿವೆ :  								
	(ಬಿ.ಎಸ್.ಬಿ.)

	1. ಪ್ರೆಸ್ ಅಥವಾ ಮಿಲಿಟರಿ ಪ್ರೆಸ್: ಇದರಲ್ಲಿ ಮೊದಲು ಭಾರವನ್ನು ಎದೆಮಟ್ಟದವರೆಗೆ ಎತ್ತಿ, ಎದೆ ಅಥವಾ ಬಗ್ಗಿಸಿದ ತೋಳುಗಳನ್ನು ಆಧರಿಸಿ ಸೆಕೆಂಡ್ ಹಿಡಿದಿರಬೇಕು. ಅನಂತರ ಅದನ್ನು ತಲೆಯ ಮೇಲಕ್ಕೆ ಎತ್ತಿ ತೋಳುಗಳನ್ನು ಸಂಪೂರ್ಣ ನೀಡಿ ಆ ಭಾರವನ್ನು ದೃಢವಾಗಿ ಎರಡು ಸೆಕೆಂಡ್ ಹಿಡಿದಿರಬೇಕು. 

	2. ಸ್ನ್ಯಾಚ್ : ಇಲ್ಲಿ ಭಾರವನ್ನು ಒಂದೇ ಸಲಕ್ಕೆ ಎತ್ತಿ ಹಿಡಿಯಬೇಕು. ಎದೆಯ ಮಟ್ಟದಿಂದ ಮೇಲಕ್ಕೆ ಭಾರ ಎತ್ತುವಾಗ ನುಗ್ಗಿದಂತೆ ಬಲಪ್ರ ಯೋಗಿಸಬಹುದು ಅಥವಾ ಮಂಡಿಯನ್ನು ಬಗ್ಗಿಸಿ ಹೆಚ್ಚಿನ ಆಧಾರ ಕೊಟ್ಟು ಎತ್ತಬಹುದು. 

	3. ಕ್ಲೀನ್ ಮತ್ತು ಜರ್ಕ್. ಈ ರೀತಿಯಲ್ಲಿ ಭಾರವನ್ನು ಒಂದು ಅಥವಾ ಎರಡು ಕೈಲಿ ಎತ್ತಬಹುದು. ಮೊದಲು ಭಾರವನ್ನು ಎದೆ ಮಟ್ಟಕ್ಕೆ ಎತ್ತಬೇಕು. ಇದು ಕ್ಲೀನ್ ಎನಿಸಿಕೊಳ್ಳುತ್ತದೆ. ಎದೆಮಟ್ಟದಿಂದ ಮೇಲಕ್ಕೆ ಎತ್ತುವಾಗ ಬಲಪ್ರಯೋಗಿಸಬಹುದು ಅಥವಾ ಮಂಡಿಯನ್ನು ಬಗ್ಗಿಸಿ ಭಾರಕ್ಕೆ ಅದನ್ನು ಆಧರಿಸಿ ಎತ್ತಬಹುದು. 

	ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರವನ್ನು ಎರಡೂ ಕೈಗಳಿಂದ ಎತ್ತುವುದೇ ರೂಢಿ. ಸ್ಪರ್ಧಾಳುಗಳ ತೂಕಕ್ಕೆ ತಕ್ಕಂತೆ ವರ್ಗಗಳಾಗಿ ವಿಂಗಡಿಸಿರುತ್ತಾರೆ. ಸ್ಪರ್ಧಿಗಳು ಪ್ರೆಸ್, ಸ್ನ್ಯಾಚ್ ಮತ್ತು ಜರ್ಕ್‍ರೀತಿಗಳಲ್ಲಿ ಎತ್ತಿದ ಭಾರದ ಮೊತ್ತವನ್ನು ಗುಣಿಸಿ ಅವರ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಇಬ್ಬರು ಸ್ಪರ್ಧಾಳುಗಳು ಎತ್ತಿದ ಭಾರದ ಮೊತ್ತ ಒಂದೇ ಆದಾಗ ಅವರಲ್ಲಿ ಯಾರು ಕಡಿಮೆ ದೇಹತೂಕದವರೋ ಅವರಿಗೆ ಮೊದಲ ಸ್ಥಾನ ಕೊಡಲಾಗುತ್ತದೆ. 

	ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿಹಿಡಿದ; ಹನುಮಂತ ಸಂಜೀವಿನಿ ಪರ್ವತವನ್ನು ತಂದ ಎಂದು ಹೇಳುವ ಭಾರವನ್ನು ಎತ್ತಿದ ಕಥೆಗಳು ಭಾರತದಲ್ಲಿ ಪ್ರಚಲಿತವಾಗಿವೆ. ಪ್ರಾಚೀನ ಈಜಿಪ್ಟ್, ಟರ್ಕಿ, ಜಪಾನ್ ಮತ್ತು ಯುರೋಪಿನ ದೇಶಗಳಲ್ಲಿ ಭಾರಎತ್ತುವ ಸ್ಪರ್ಧೆ ನಡೆಯುತ್ತಿದ್ದುವು. 1896ರಲ್ಲಿ ಒಲಿಂಪಿಕ್ಸ್‍ನಲ್ಲಿ ಒಂದು ಮತ್ತು ಎರಡು ಕೈಗಳಿಂದ ಭಾರ ಎತ್ತುವ ಸ್ಪರ್ಧೆಗಳಿದ್ದುವು. 1900ರ ಅನಂತರ ಒಲಿಂಪಿಕ್ಸ್‍ನಲ್ಲಿ ಆ ರೀತಿ ಸ್ಪರ್ಧೆಗಳು ನಡೆಯಲಿಲ್ಲ. 

	1920ರಲ್ಲಿ ಭಾರಎತ್ತುವ ಸ್ಪರ್ಧೆಗಳು ಪುನರಾರಂಭಗೊಂಡವು. ಎರಡು ಕೈಗಳಿಂದ ಭಾರ ಎತ್ತುವಿಕೆ ಮಾತ್ರ ನಡೆಸಲಾಯಿತು. ತೂಕಕ್ಕೆ ಅನುಗುಣವಾಗಿ ಸ್ಪರ್ಧಾಳುಗಳ ವರ್ಗೀಕರಣವಾಯಿತು. ಫೆದರ್‍ವೇಯ್ಟ್, ಲೈಟ್‍ವೇಯ್ಟ್, ಮಿಡ್ಲ್‍ವೇಯ್ಟ್, ಲೈಟ್‍ಹೆವಿವೇಯ್ಟ್, ಹೆವಿವೇಯ್ಟ್ ಮೊದಲಾದ ವರ್ಗಗಳಲ್ಲಿ ಸ್ಪರ್ಧೆಗಳು ಆರಂಭವಾದುವು. ಇವುಗಳ ಜೊತೆಗೆ ಬಾಟಮ್‍ವೇಯ್ಟ್, ಮಿಡ್ಲ್‍ಹೆವಿವೇಯ್ಟ್ ವಿಭಾಗಗಳೂ ಏರ್ಪಟ್ಟವು. 

	56 ಕೆಜಿ ತೂಕದ ಸ್ಪರ್ಧಾಳುಗಳು ಬಾಟಮ್‍ವೇಯ್ಟ್; 	60 ಕೆಜಿ ತೂಕದ ಸ್ಪರ್ಧಾಳುಗಳು ಫೆದರ್‍ವೇಯ್ಟ್; 60 ರಿಂದ 67.5 ಕೆಜಿ ತೂಕದ ಸ್ಪರ್ಧಾಳುಗಳು ಲೈಟ್‍ವೇಯ್ಟ್; 75 ಕೆಜಿ ತೂಕದ ಸ್ಪರ್ಧಾಳುಗಳು ಮಿಡ್ಲ್‍ವೇಯ್ಟ್; 75 ರಿಂದ 82.5 ಕೆಜಿ ತೂಕದ ಸ್ಪರ್ಧಾಳುಗಳು ಲೈಟ್‍ಹೆವಿವೇಯ್ಟ್; 90 ಕೆಜಿ ಗಿಂತ ಹೆಚ್ಚು ತೂಕದ ಸ್ಪರ್ಧಾಳುಗಳು ಹೆವಿವೇಯ್ಟ್; ಹೀಗೆ ಬೇರೆ ಬೇರೆ ವಿಭಾಗಗಳಿವೆ.

	1972ರ ಒಲಿಂಪಿಕ್ಸ್‍ನಲ್ಲಿ ಬಾಟಮ್‍ವೇಯ್ಟ್‍ಗಿಂತ ಕಡಿಮೆ ತೂಕದ ಫ್ಲೈವೇಯ್ಟ್ ವಿಭಾಗ ಮತ್ತು ಹೆವಿವೇಯ್ಟ್‍ಗಿಂತ ಅಧಿಕ ತೂಕದ ಸೂಪರ್ ಹೆವಿವೇಯ್ಟ್ ವಿಭಾಗಗಳು ಸೇರ್ಪಡೆಯಾಗಿವೆ. 1972ರಲ್ಲಿ ರಷ್ಯದ ವಸ್ಸೀಲಿ ಅಲೆಕ್ಸೇಯೆವ್ 640 ಕೆ.ಜಿ. (235-175-230) ತೂಕ ಎತ್ತಿ ಪ್ರಪಂಚದ ಅತಿ ಶಕ್ತಿಶಾಲಿ ಮನುಷ್ಯ ಎನಿಸಿಕೊಂಡ. 2004ರ ಒಲಂಪಿಕ್ಸ್‍ನಲ್ಲಿ ಇರಾನಿನ ಹುಸೈನ್ ರೇಜ ಜಾದೇಹ್ 472.5 ಕೆ.ಜಿ. ಭಾರತವೆತ್ತಿ ವಿಶ್ವ ದಾಖಲೆ ನಿರ್ಮಿಸಿದ.					
	(ಜಿ.ಎಚ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ